ಕ್ರೈಸ್ತ ಮದುವೆ

ಸಾಮಾನ್ಯವಾಗಿ ಕೈಸ್ತ ಮದುವೆ ಸಂಪ್ರದಾಯ ಸ್ವಭಾವ ಸಿದ್ಧವಾದ ಸೂತ್ರಗಳನ್ನು ಅನುಸರಿಸುತ್ತದಾದರೂ ಕೆಲವು ವಿಷಯಗಳಲ್ಲಿ ತೀರ ಪ್ರಾಚೀನ ಮತ್ತು ತೀರ ಆಧುನಿಕ ಪದ್ಧತಿಗಳಿಂದ ಬೇರೆಯಾಗಿದೆ. ಮುಖ್ಯವಾಗಿ ಸ್ತ್ರೀಯರಿಗೆ ಪುರುಷರೊಂದಿಗೆ ಸಮಾನ ಸ್ಥಾನವನ್ನು ಕೊಡುವುದೂ ಅಲ್ಲದೆ ಮದುವೆಯ ಸಂಬಂಧಕ್ಕೆ ಬಿಡುಗಡೆ (ವಿಚ್ಛೇದ) ಇಲ್ಲವೆಂತಲೂ ಇದು ಒತ್ತಿ ಹೇಳುತ್ತದೆ.

	ಮದುವೆಯ ಸಂಬಂಧವನ್ನು ಪರಿತ್ಯಾಗ ಪತ್ರದ ಮೂಲಕ ರದ್ದು ಮಾಡಿಕೊಳ್ಳುವ ಯೆಹೂದ್ಯ ಪದ್ಧತಿಯನ್ನು ಯೇಸುಕ್ರಿಸ್ತ ಖಂಡಿಸಿ ದೇವರು ಆದಿಯಲ್ಲಿ ಅದಕ್ಕೆ ನಿರ್ಣಯಿಸಿದ ಉನ್ನತ ಸ್ಥಾನವನ್ನೇ ಸ್ಥಾಪಿಸಿ, ತಾನು ಮಾಡಿದ ಕಾರ್ಯಗಳಿಂದಲೂ ತನ್ನ ಬೋಧನೆಯಿಂದಲೂ ಮದುವೆ ಎಷ್ಟು ಪವಿತ್ರವಾದುದ್ದೆಂಬುದನ್ನು ತಿಳಿಯಪಡಿಸಿದ. ಮದುವೆಯ ಸಂಬಂಧದ ಪವಿತ್ರ ಸ್ವಭಾವವನ್ನು ಪ್ರಸ್ತಾಪಿಸುತ್ತ ಸಂತಪಾಲ್ ಅದು ಸಭೆಯ ಪವಿತ್ರಸಂಸ್ಕಾರಗಳಲ್ಲಿ ಒಂದಾಗಿರತಕ್ಕದ್ದೆಂದು ಸೂಚಿಸಿದ್ದಾನೆ. ಈಗಲೂ ಮದುವೆಯ ವಿಷಯದಲ್ಲಿ ಧರ್ಮಸಭೆಯ ಪಾತ್ರ ಹಿರಿಯದೇ ಆಗಿದೆ. ಸಿವಿಲ್ ಮದುವೆ, ವಿವಾಹ ವಿಚ್ಛೇದ ಇವೆಲ್ಲ ಇತ್ತೀಚಿನವು.		   
											(ಎಚ್.ಡಿ.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ